ಗುರುವಾರ, ಫೆಬ್ರವರಿ 25, 2010

HEDDARIYANCHINA MARAGALU


ಸಾಲಾಗಿ ನಿಂತ ಮರಗಳ ನಡುವೆ ನಾನೂ ಮರವಾಗಿದ್ದೇನೆ,
ಭೋರೆಂದು ಸಾಗುವ ವಾಹನಗಳ ನಡುವೆ ಮೌನವಾಗಿದ್ದೇನೆ
ಧೂಳ ಮಳೆಯ ನಡುವೆ 
ನಗುವ ಹೂಗಳ  ಹೊತ್ತು,
ಕೆಂಪಗಾಗಿದ್ದೇನೆ

ಎಲ್ಲಿಯ ಮೋಡ,
ಎಲ್ಲಿಯ ಮಳೆ
ದಿನವಿಡೀ  ಸುರಿವ ಬಿಸಿಲು .
ಪಾಪ ಪುಣ್ಯದ ನೆನಪು
ಗಟ್ಟಿ ಹಗ್ಗದ ಕುಣಿಕೆ,
ಕ್ಷಣವ ಎಣಿಸುವ
ಗಟ್ಟಿ ಜೀವ.

ಹಲವು ಹನ್ನೊಂದರ ಮದ್ಯೆ
ಮೂಕ ಜೀವದ ಗೋಳು
ಎಲ್ಲಿಯೂ ಸಲ್ಲದ
ಏಕಾಂಗಿ.
ಉರಿವ ಚಿತೆಗಳ ಮದ್ಯೆ
ಇಂದು ನಾಳೆಯ ನೆನೆದು,
ನಿರ್ಲಿಪ್ತನಾಗಿಯೇ
ನಗುವ ಯೋಗಿ.

ಬೇಡ ನನಗೆ  ಕರುಣೆ,
ಬೇಡ ನನಗೆ ಆರೈಕೆ,
ಬೇಡ ನನಗೆ ನಿಮ್ಮ
ತುಟಿಯಂಚಿನ ಮಾತು.
ಬಾಡಿ  ಹೋಗಲಿ ಹೂವು,
ಬಂಜೆಯಾಗಲಿ  ಬಸಿರು
ಬಿಟ್ಟು ಬಿಡಿ ನನ್ನನ್ನು
ನನ್ನ ಪಾಡಿಗೆ.

ನಾನು  ಮರವಾಗಿದ್ದೇನೆ,
ಮರವಾಗಿರುತ್ತೇನೆ.

 .